Friday, May 24, 2013

ಫಿಕ್ಸಿಂಗ್‌ ಭೂತಕ್ಕೆ ಹೆದರಿ ಐ.ಪಿ.ಎಲ್‌. ರದ್ದು ಸರಿಯಲ್ಲ


ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಹಾಕಿಯಾಗಿದ್ದರೂ ಭಾರತ ಉಪಖಂಡ ಸೇರಿದಂತೆ ಏಷ್ಯಾ ಖಂಡದಲ್ಲಿ ಜನಪ್ರಿಯವಾಗಿರುವ ಆಟ ಕ್ರಿಕೆಟ್‌. ಇದೇ ಕಾರಣದಿಂದ ಇಲ್ಲಿ ಕ್ರಿಕೆಟ್‌ ಆಟಗಾರರಿಗೆ ದೇವತಾ ಸ್ಥಾನ ಸಿಗುತ್ತದೆ, ಜಾಹಿರಾತು ಮಾಧ್ಯಮದಲ್ಲಿ ಸಿಂಹಪಾಲು ನಮ್ಮ ಕ್ರಿಕೆಟಿಗರಿಗೆ ಮೀಸಲು, ದೇಶದ ಪರ ಯಾವುದೇ ಮಾದರಿಯ ಪಂದ್ಯಗಳಲ್ಲಿ ಅಂತಾರಾಷ್ಟ್ರೀಯ ಕ್ಯಾಪ್‌ ಧರಿಸಿ ಮಿಂಚಬೇಕೆಂಬುದು ಪ್ರತೀ ಕ್ರಿಕೆಟಿಗನ ಕನಸು. ಆರು ವರ್ಷಗಳ ಹಿಂದೆ ಬಿಸಿಸಿಐ ತನ್ನ ಸ್ವಂತ ಬ್ಯಾನರ್‌ ಅಡಿಯಲ್ಲಿ ಇಂಡಿಯನ್‌ ಪ್ರಿಮಿಯರ್‌ ಲೀಗ್‌ (ಐಪಿಎಲ್‌) ಎಂಬ ರಂಗು ರಂಗಿನ ಕ್ರೀಡಾಕೂಟದ ಕನಸನ್ನು ಬಿಚ್ಚಿಟ್ಟಾಗ ಕ್ರಿಕೆಟ್‌ ವಿಶ್ವವೇ ಬೆರಗಾಗಿತ್ತು, ಇದಲ್ಲೆಕ್ಕಿಂತ ಮಿಗಿಲಾಗಿ ದೇಶದ ಕ್ರಿಕೆಟ್‌ ರಸಿಕರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿತ್ತು.

ಐಪಿಎಲ್‌ ಎಂಬ ಮಾಯಾ ಪೆಟ್ಟಿಗೆ ಆರಂಭದಿಂದಲೇ ಒಂದೊಂದು ವಾದಗಳಿಂದ ಸುದ್ದಿಯಾಗುತ್ತಿದ್ದರೂ ಬಿಸಿಸಿಐ ತನ್ನಲ್ಲಿರುವ ಹಣ ಬಲ ಮತ್ತು ಅಧಿಕಾರವನ್ನು ಬಳಸಿ ಪ್ರತೀ ಕೂಟವೂ ಯಶಸ್ವಿಯಾಗುವಂತೆ ಮಾಡುತ್ತಿತ್ತು. ಆದರೆ ಪ್ರಸ್ತುತ ಸಾಗುತ್ತಿರುವ 6ನೇ ಐಪಿಎಲ್‌ನಲ್ಲಿ ಎದ್ದಿರುವ ಬಿರುಗಾಳಿ ಈ ದೇಶಿಯ ಕ್ರೀಡಾಕೂಟದ ಮೆಲೊಂದು ಅನಿಶ್ಚಿತತೆಯ ಚಾದರವನ್ನೇ ಹಾಸಿ ಬಿಟ್ಟಿದೆ. ಇದರೊಂದಿಗೆ ಐಪಿಎಲ್‌ ಕ್ರೀಡಾಕೂಟವನ್ನೇ ನಿಷೇಧಿಸಬೇಕೆಂಬ ಕೂಗು ಎಲ್ಲೆಡೆ ಎದ್ದಿದೆ. ಕ್ರಿಕೆಟ್‌ ಚರಿತ್ರೆಯಲ್ಲಿಯೇ ಪ್ರಪ್ರಥಮ ಭಾರಿಗೆ ಮ್ಯಾಚ್‌ ಫಿಕ್ಸಿಂಗ್‌ ಬಹಿರಂಗಗೊಂಡಾಗಲೂ ವಿಶ್ವಾದ್ಯಾಂತ ಇದೇ ರೀತಿಯ ಕೂಗು ಎದ್ದಿತ್ತು. ಆದರೆ ಅದೆಲ್ಲವನ್ನೂ ನೆನಪಿನ ಮರೆಗೆ ಸರಿಸಿ ಕಾಲಕಾಲಕ್ಕೆ ಕ್ರಿಕೆಟ್‌ ಗೆಲ್ಲುತ್ತಾ ಬಂದಿದೆ ಎಂದಾದರೆ ಇದಕ್ಕೆ ಕಾರಣ ಕ್ರೀಡಾಸ್ಪೂರ್ತಿಯಿಂದ ತಮ್ಮ ತಮ್ಮ ದೇಶದ ಪರವಾಗಿ ಆಡುತ್ತಿರುವ ಹಲವು ಮಹಾನ್‌ ಆಟಗಾರರ ಕ್ರೀಡಾ ಸ್ಪೂರ್ತಿ ಭರಿತ ಶ್ರಮವಲ್ಲವೇ?

ಇನ್ನು ಐಪಿಎಲ್‌ ವಿಷಯಕ್ಕೆ ಬರುವುದಾದರೆ, ನಮ್ಮ ದೇಶದ ಎಳೆಯ ಕ್ರಿಕೆಟ್‌ ಪ್ರತಿಭೆಗಳಿಗೆ ತಮ್ಮ ಆಟದ ಜ್ಞಾನವನ್ನು ವಿಸ್ತರಿಸಿಕೊಳ್ಳಲಿರುವ ಮಹಾನ್‌ ವೇದಿಕೆ ಇದು. ಎಲ್ಲಾ ದೇಶಗಳ ಘಟಾನುಘಟಿ ಆಟಗಾರರು 9 ತಂಡಗಳಲ್ಲಿ ಹಂಚಿಹೋಗಿ ತಮ್ಮ ಜ್ಞಾನವನ್ನು ಎಳೆಯ ಕ್ರಿಕೆಟಿಗರಿಗೆ ಹಂಚುತ್ತಿರುವ ಕೂಟದು. ಇನ್ನು ಪ್ರತೀ ವರ್ಷ ಎರಡು ತಿಂಗಳುಗಳ ಕಾಲ ದೇಶೀಯ ಕ್ರೀಡಾ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಒಂದಿಲ್ಲೊಂದು ಪಂದ್ಯದಲ್ಲಿ ಅನಾವರಣಗೊಳಿಸುವ ಸುವರ್ಣಾವಕಾಶ ಇಲ್ಲಿರುತ್ತದೆ. ಐಪಿಎಲ್‌ನಿಂದಲೇ ರಹಾನೆ, ಅಂಬಟಿ ರಾಯಡು, ಅಶ್ವಿ‌ನ್‌, ನಮನ್‌ ಓಝಾ ಸೇರಿಂದಂತೆ ಇನ್ನೂ ಅನೇಕರು ವಿಶ್ವ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ?

ಒಂದು ದೃಷ್ಟಿಯಿಂದ ನೋಡಿದರೆ ಬಿಸಿಸಿಐ ಮತ್ತು ಫ್ರಾಂಚೈಸಿಗಳಿಗೆ ಐಪಿಎಲ್‌ "ಇಂಡಿಯನ್‌ ಪೈಸಾ ಲೀಗ್‌' ಆಗಿದ್ದರೆ, ಯುವ ಕ್ರೀಡಾಪಟುಗಳಿಗೆ ಇದು "ಇಂಡಿಯನ್‌ ಪ್ರತಿಭಾ ಲೀಗ್‌' ಕೂಡಾ ಆಗಿದೆ ಎಂಬುದನ್ನು ನಾವು ಮರೆಯಬಾರದು. ಸುಮಾರು 200 ಆಟಗಾರರ ಪ್ರತಿಭಾ ಪ್ರದರ್ಶನಕ್ಕೆ ಮಹಾನ್‌ ವೇದಿಕೆಯಾಗಿರುವ ಈ ಐಪಿಎಲ್‌ ಎಂಬ ಕೂಟದಲ್ಲಿ ದುರಾಸೆಗೆ ಬಲಿ ಬಿದ್ದ ಶ್ರೀಶಾಂತ್‌, ಚಾಂಡಿಲ, ಅಂಕಿತ್‌ರಂತಹ ಕೆಲವೇ ಕೆಲವು ಆಟಗಾರರಿಂದಾಗಿ (?) ಐಪಿಎಲ್‌ ಟೂರ್ನಿ ರದ್ದುಪಡಿಸುವುದು ಎಷ್ಟು ಸರಿ?

ಈ ಎಲ್ಲಾ ಸಾಧಕ ಬಾಧಕಗಳ ಕುರಿತಾಗಿ ಸರಕಾರ, ಕ್ರೀಡಾ ಮಂಡಳಿ ಹಾಗೂ ಕ್ರೀಡಾ ಪ್ರೇಮಿಗಳು ಮುಕ್ತ ಮನಸ್ಸಿನಿಂದ ಯೋಚಿಸಬೇಕಾದ ಸಮಯವಿದು... 

No comments:

Post a Comment