Friday, March 9, 2012

ಮಿಸ್‌ ಯು ವಾಲ್‌



ಕಲಾತ್ಮಕ ಆಟಗಾರನ ಎರಡನೇ ಇನ್ನಿಂಗ್ಸ್‌ ಅಂತ್ಯ

ಕಲಾತ್ಮಕ ಆಟಗಾರ, ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌, ಅರೆ ಕಾಲಿಕ ವಿಕೆಟ್‌ ಕೀಪರ್‌, ಟೀಮ್‌ ಇಂಡಿಯಾದ ಮಾಜಿ ಕಪ್ತಾನ ಎಲ್ಲಕ್ಕಿಂತ ಮಿಗಿಲಾಗಿ "ವಾಲ್‌' ಖ್ಯಾತಿಯ ರಾಹುಲ್‌ ಶರದ್‌ ದ್ರಾವಿಡ್‌ ಇಂದು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಕರ್ನಾಟಕ ರಾಜ್ಯ ಕ್ರಿಕೆಟ್‌ ಅಕಾಡೆಮಿ ಆವರಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತನ್ನ ನಿವೃತ್ತಿಯ ನಿರ್ಧಾರವನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಜ್ಯಾಮಿ ಪ್ರಕಟಿಸಿದ ಸಂದರ್ಭದಲ್ಲಿ ಬಿಸಿಸಿಐನ ಅಧ್ಯಕ್ಷ ಶ್ರೀನಿವಾಸನ್‌ ಹಾಗೂ ಕೆಎಸ್‌ಸಿಎ ಅಧ್ಯಕ್ಷರಾದ ಹಾಗೂ ದ್ರಾವಿಡ್‌ ಅವರ ಆಪ್ತ ಮಿತ್ರ ಅನಿಲ್‌ ಕುಂಬ್ಲೆ ಈ ವಿದಾಯದ ಕ್ಷಣಕ್ಕೆ ಅಧಿಕೃತ ಸಾಕ್ಷಿಯಾಗಿದ್ದರು.


ಎದುರಾಳಿ ಬೌಲರ್‌ಗಳನ್ನು ನಿರ್ಲಿಪ್ತ ಚಿತ್ತದಿಂದ ಎದುರುಸಿತ್ತಿದ್ದ ರೀತಿಯಲ್ಲಿಯೇ ದ್ರಾವಿಡ್‌ ತನ್ನ 16 ವರ್ಷಗಳ ಸುಧೀರ್ಘ‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುವ ನಿರ್ಧಾರವನ್ನು ತನ್ನ ಎಂದಿನ ನಗುಮುಖದ ನಿರ್ಲಿಪ್ತ ಭಾವದಿಂದಲೇ ಪ್ರಕಟಿಸಿದರು. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ 1996ರಲ್ಲಿ ಸ್ಮರಣೀಯವಾಗಿ ಆರಂಭಗೊಂಡ ಈ ಕಲಾತ್ಮಕ ಆಟಗಾರನ ಕ್ರಿಕೆಟ್‌ ಬಾಳ್ವೆ ಈ ರೀತಿಯಾಗಿ ಅನಿರೀಕ್ಷಿತ ಅಂತ್ಯವಾಯಿತು.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಅಂತ್ಯಗೊಂಡ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಗಮನಾರ್ಹ ಸಾಧನೆ ತೋರಲು ದ್ರಾವಿಡ್‌ ವಿಫ‌ಲರಾಗಿದ್ದರು. ಆದಾಗಲೆ ಭಾರತ ತಂಡದ ಹಿರಿಯ ಆಟಗಾರರು ನಿವೃತ್ತಿಯಾಗಿ ಕಿರಿಯರಿಗೆ ಅವಕಾಶ ಮಾಡಿಕೊಡಬೇಕೆಂಬ ಕೂಗು ಕ್ರಿಕೆಟ್‌ ವಲಯದಲ್ಲಿ ಕೇಳಿ ಬರುತ್ತಿತ್ತು. ಇದಕ್ಕೆ ಮೌನವಾಗಿಯೇ ಸ್ಪಂದಿಸಿದಂತೆ ಸೂಕ್ಷ್ಮ ಮನಸ್ಥಿತಿಯ ಆಟಗಾರ ರಾಹುಲ್‌ ತಮ್ಮ ಟೆಸ್ಟ್‌ ಕ್ರಿಕೆಟ್‌ ಜೀವನಕ್ಕೆ ನಿವೃತ್ತಿ ಹೇಳಿದರು.


ಕಳೆದ ವರ್ಷವಷ್ಟೆ ಅವರು ಏಕದಿನ ಮತ್ತು ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. 164 ಟೆಸ್ಟ್‌ ಪಂದ್ಯಗಳಿಂದ 13288ರನ್‌ಗಳನ್ನು ಹಾಗೂ 344 ಏಕದಿನ ಪಂದ್ಯಗಳಿಂದ 10889ರನ್‌ಗಳನ್ನು ಕಲೆಹಾಕಿರುವ ಈ ಕಲಾತ್ಮಕ ಆಟಗಾರನ ಬ್ಯಾಟಿಂಗ್‌ ನೋಡುವುದೆಂದರೆ ಕ್ರಿಕೆಟ್‌ ಪ್ರೇಮಿಗಳಿಗೆ ಒಂದು ಹಬ್ಬ, ದಿವ್ಯಾನಂದದ ಅನುಭೂತಿ ಉಂಟಾಗುತ್ತಿತ್ತು. ಭಾರತದ ಉಪಖಂಡದಲ್ಲಿ ಮಾತ್ರವಲ್ಲದೆ ವಿದೇಶಿ ನೆಲಗಳಲ್ಲಿ ಭಾರತ ತಂಡಕ್ಕೆ ಅಪದಾºಂದವನಾಗಿ ಕಾಣಿಸಿಕೊಳ್ಳುತ್ತಿದ್ದ ದ್ರಾವಿಡ್‌ ತನ್ನ ಕಲಾತ್ಮಕ ಹಾಗೂ ಸ್ಥಿತಪ್ರಜ್ಞೆಯ ಆಟದಿಂದ ಎದುರಾಳಿ ತಂಡವನ್ನು ಕಂಗೆಡಿಸುತ್ತಿದ್ದರು. ತನ್ನ ಕಲಾತ್ಮಕ ಶೈಲಿಯಿಂದ ಮತ್ತು ವಿವಾದ ರಹಿತ ವೃತ್ತಿ ಜೀವನದಿಂದಾಗಿ ರಾಹುಲ್‌ ಭಾರತದ ಕ್ರಿಕೆಟ್‌ ಅಭಿಮಾನಿ ವರ್ಗದಲ್ಲಿ ಮಾತ್ರವಲ್ಲದೆ ವಿಶ್ವ ಮಟ್ಟದಲ್ಲಿ ತನ್ನದೇ ಅಭಿಮಾನಿ ವರ್ಗವನ್ನು ಹೊಂದಿದ್ದರು. ಕ್ರಿಕೆಟ್‌ ವಿಶ್ವದಲ್ಲಿ ಮಿಂಚಲು ಬಯಸುತ್ತಿರುವ ಅನೇಕ ಯುವ ಕ್ರಿಕೆಟಿಗರು ರಾಹುಲ್‌ ದ್ರಾವಿಡ್‌ ಅವರನ್ನು ತಮ್ಮ ರೋಲ್‌ ಮಾಡೆಲ್‌ ಎಂದು ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಈ ಕ್ರಿಕೆಟಿಗನ ಖ್ಯಾತಿ ಹಬ್ಬಿತ್ತು.


ಇನ್ನು ಮುಂದೆ ದ್ರಾವಿಡ್‌ ಐಪಿಎಲ್‌ನಲ್ಲಿ ಮುಂದುವರೆಯುವ ಇಂಗಿತವನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು, ಮಾತ್ರವಲ್ಲದೆ ತನ್ನ ಕುಟುಂಬದೊಂದಿಗೆ ಮುಂದಿನ ದಿನಗಳನ್ನು ಕಳೆಯುವ ತಮ್ಮ ಮನದಾಸೆಯನ್ನೂ ಸಹ ಇದೇ ಸಂದರ್ಭದಲ್ಲಿ ದ್ರಾವಿಡ್‌ ಹೊರಗೆಡಹಿದರು.




ದ್ರಾವಿಡ್‌ ಕ್ರೀಸಿಗೆ ಬಂದು ನಿಂತರೆ ವಾಲ್‌
ಫೀಲ್ಡಿಂಗ್‌ನಲ್ಲೂ ಜ್ಯಾಮಿ ಕಮಾಲ್‌
ಯುವ ಕ್ರಿಕೆಟಗರಿಗೆ ನೀವೇ ರೋಲ್‌ ಮಾಡೆಲ್‌
ನಿಮ್ಮ ಆಟವನ್ನು ಮರೆಯುವುದೆಂತು ರಾಹುಲ್‌
ನಿಮ್ಮ ಆಟದ ನೆನಪು ಎಂದೆಂದೂ ಹಸಿರು ಎಲ್ಲರೆದೆಯಲ್ಲೂ...