Tuesday, July 5, 2011

ಯೋಚನೆ ನಿತ್ಯ ನೂತನ...





ಆ ಊರಿನ ಬಸ್‌ ಸ್ಟ್ಯಾಂಡ್‌ನ‌ ಮೆಟ್ಟಿಲ ಮೇಲೆ ಕುರುಡನೊಬ್ಬ ಕುಳಿತಿದ್ದ , ಆತನ ಕಾಲಬುಡದಲ್ಲಿ ಒಂದು ಟೊಪ್ಪಿಯಿತ್ತು ಮತ್ತು ಅದರ ಪಕ್ಕದಲ್ಲೆ “ನಾನು ಕುರುಡ; ಏನನ್ನೂ ಕಾಣಲಾರೆ ದಯವಿಟ್ಟು ಸಹಾಯ ಮಾಡಿ’ ಎಂದು ಬರೆದಿದ್ದ ಚಿಕ್ಕ ಬೋರ್ಡ್‌ ಇತ್ತು. ಬಹಳಷ್ಟು ಜನ ಆ ದಾರಿಯಾಗಿ ಹೋಗಿ ಬರುತ್ತಿದ್ದರೂ ಈ ಕುರುಡನ ಟೊಪ್ಪಿಯಲ್ಲಿ ನಾಣ್ಯಗಳಷ್ಟೆ ಬಿದ್ದಿದ್ದವು. ಕುರುಡನನ್ನೂ ಆತನ ಟೊಪ್ಪಿಯನ್ನೂ ಪಕ್ಕದಲ್ಲಿದ್ದ ಬೊರ್ಡ್‌ ಅನ್ನು ನೋಡಿಯೂ ಜನರು ಇಂಥಹ ಪ್ರದೇಶದಲ್ಲಿ ಇದೆಲ್ಲ ಸಾಮಾನ್ಯ, ಇದೆಲ್ಲ ಹೊಟ್ಟೆ ಪಾಡಿಗಾಗಿ ಮಾಡುವ ನಾಟಕ ಎಂದುಕೊಂಡು ಮುಂದೆ ಸಾಗುತ್ತಿದ್ದರು.


ಆ ಸಮಯದಲ್ಲಿ ಅದೇ ದಾರಿಯಾಗಿ ಒಂದು ಜಾಹಿರಾತು ಕಂಪೆನಿಯ ಉದ್ಯೋಗಿ ಬಂದ, ಕ್ರಿಯಾಶೀಲ ಯೋಚನೆಯ ವ್ಯಕ್ತಿಯಾದ ಆತ ಈ ಕುರುಡನನ್ನೂ ಆ ಬರಹವನ್ನೂ, ಬಳಿಯಲ್ಲಿ ಬಿದ್ದಿದ್ದ ಕೆಲವೇ ಕೆಲವು ನಾಣ್ಯಗಳನ್ನೂ ಕಂಡ, ಒಂದರೆಕ್ಷಣ ನಿಂತು ಯೋಚಿಸಿದ, ನಂತರ ಏನನ್ನೂ ನಿರ್ಧರಿಸಿ ಆ ಬೋರ್ಡನ್ನು ತಿರುಗಿಸಿ ಅದರಲ್ಲೇನೋ ಬರೆದು ಅದನ್ನು ಆ ಕುರುಡನ ಕಾಲ ಬುಡದಲ್ಲಿರಿಸಿ ಮುಂದೆ ಸಾಗಿದ.


ತನ್ನ ಹೊಸ ಪ್ರಯೋಗದ ಫಲಿತಾಂಶ ತಿಳಿಯಲು ಸಾಯಂಕಾಲ ಅದೇ ಜಾಗಕ್ಕೆ ಬಂದು ಅಲ್ಲಿದ್ದ ಕುರುಡನ ಟೊಪ್ಪಿಯನ್ನು ನೋಡುತ್ತಾನೆ, ಪರಮಾಶ್ಚರ್ಯ, ಮಧ್ಯಾಹ್ನ ತಾನು ನೋಡುವಾಗ ಅದರಲ್ಲಿದ್ದ ಕೆಲವೇ ಕೆಲವು ನಾಣ್ಯಗಳಿಗೆ ಬದಲಾಗಿ ಸಂಜೆಯೊಳಗಾಗಿ ಆ ಟೊಪ್ಪಿಯು ಅನೇಕ ನಾಣ್ಯ ಮತ್ತು ನೋಟುಗಳಿಂದ ತುಂಬಿ ಹೋಗಿತ್ತು. ತನ್ನ ಕ್ರಿಯಾಶೀಲ ಯೋಚನೆಯ ಪ್ರಯೋಗ ಸಫಲತೆಯಾದ ಖುಷಿಯೊಂದಿಗೆ ಮತ್ತು ಕುರುಡನ ಆ ದಿನದ ಬಾಳ ಬುತ್ತಿ ಭರ್ತಿಯಾದ ಧನ್ಯತೆಯೊಂದಿಗೆ ಆತ ಮುಂದೆ ಹೋದ.


ಅಂದ ಹಾಗೆ ಆ ಬೋರ್ಡ್‌ನಲ್ಲಿ ಆ ವ್ಯಕ್ತಿ ಬರೆದ ಮಾಂತ್ರಿಕ ವಾಕ್ಯಗಳೇನು ಗೊತ್ತೆ...?


“ ಇದು ವಸಂತ ಋತುವಿನ ಸುಂದರ ಸಮಯ. ಆದರೆ... ನನ್ನ ಕಣ್ಣುಗಳಿಗೆ ಅದನ್ನು ಕಾಣುವ ಭಾಗ್ಯವಿಲ್ಲ...!!”


ಗೆಳೆಯರೇ, ನಮ್ಮ ಆಲೋಚನೆಗಳು ಕಾಲ, ಸ್ಥಳ, ಪರಿಸರಕ್ಕೆ ತಕ್ಕಂತೆ ನಮ್ಮ ಬದಲಾಗುತ್ತಿರಬೇಕು. ಯಾಕೆಂದರೆ...


“ಅದೇ ಬಾನು ಅದೇ ಭೂಮಿ ಈ ನಯನ ನೂತನ...”

No comments:

Post a Comment